Genesis 15

ಅಬ್ರಾಮನ ಸಂತತಿಗೆ ದೇವರು ಮಾಡಿದ ವಾಗ್ದಾನ

1ಈ ಸಂಗತಿಗಳು ನಡೆದ ಮೇಲೆ, ಅಬ್ರಾಮನಿಗೆ ಒಂದು ದಿವ್ಯದರ್ಶನವಾಯಿತು. ಅದರಲ್ಲಿ ಯೆಹೋವನ ದಿವ್ಯವಾಣಿಕೆಳಿಸಿತು, <<ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ ಮತ್ತು ನಿನಗೆ ಅತ್ಯಧಿಕ ಬಹುಮಾನವು ದೊರೆಯುವುದು>> ಎಂದು ಹೇಳಿದನು. 2ಅದಕ್ಕೆ ಅಬ್ರಾಮನು, <<ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನು. ಮತ್ತು ನನ್ನ ಆಸ್ತಿಯೆಲ್ಲಾ, ದಮಸ್ಕದವನಾದ ಎಲೀಯೆಜರನ ಪಾಲಾಗುತ್ತದೆಯಲ್ಲಾ?>> ಎಂದನು. 3ಪುನಃ ಅಬ್ರಾಮನು ಹೇಳಿದ್ದೇನೆಂದರೆ, <<ನೀನು ನನಗೆ ಸಂತಾನ ಕೊಡಲಿಲ್ಲವಾದ್ದರಿಂದ, ನೋಡು, ನನ್ನ ಮನೆಯಲ್ಲಿ ಹುಟ್ಟಿದವನೇ ನನಗೆ ಬಾಧ್ಯಸ್ಥನಾಗಬೇಕಾಯಿತು>> ಎಂದು ಹೇಳಿದನು.

4ಯೆಹೋವನ ವಾಕ್ಯವು ಅವನ ಸಂಗಡ ಮಾತನಾಡಿ, <<ಈ ಮನುಷ್ಯನು ನಿನಗೆ ಬಾಧ್ಯಸ್ಥನಾಗುವುದಿಲ್ಲ; ಆದರೆ ನಿನ್ನ ಹೊಟ್ಟೆಯಲ್ಲಿ ಹುಟ್ಟುವವನೇ ನಿನಗೆ ಬಾಧ್ಯಸ್ಥನಾಗುವನು>> ಎಂದು ಹೇಳಿ ಅಬ್ರಾಮನನ್ನು ಹೊರಗೆ ಕರೆದುಕೊಂಡು ಬಂದು, 5<<ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವುದು ನಿನ್ನಿಂದಾದರೆ ಲೆಕ್ಕಿಸು.>> ನಂತರ ಯೆಹೋವನು ಅಬ್ರಾಮನಿಗೆ, <<ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು>> ಎಂದು ಹೇಳಿದನು.

6ಅಬ್ರಾಮನು ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಪರಿಗಣಿಸಿದನು. 7ನಂತರ ಆತನು ಅಬ್ರಾಮನಿಗೆ, <<ಈ ದೇಶವನ್ನು ನಿನಗೆ ಬಾಧ್ಯಸ್ಥವಾಗಿ ಕೊಡುವುದಕ್ಕೋಸ್ಕರ ನಿನ್ನನ್ನು ಊರ್ ಎಂಬ ಕಲ್ದಿಯರ ಪಟ್ಟಣದಿಂದ ಬರಮಾಡಿದ ಯೆಹೋವನು ನಾನೇ>> ಎಂದು ಹೇಳಲು ಅವನು, 8<<ಕರ್ತನಾದ ಯೆಹೋವನೇ, ನಾನು ಇದನ್ನು ಬಾಧ್ಯವಾಗಿ ಹೊಂದುವೆನೆಂದು ತಿಳಿದುಕೊಳ್ಳುವುದು ಹೇಗೆ?>> ಎಂದು ಕೇಳಿದನು.

9ಅದಕ್ಕೆ ಆತನು ಯೆಹೋವನಿಗೆ, <<ನೀನು ಮೂರು ವರುಷಗಳ ಮಣಕ, ಒಂದು ಆಡು, ಒಂದು ಟಗರು, ಒಂದು ಬೆಳೆವಕ್ಕಿ, ಒಂದು ಪಾರಿವಾಳದ ಮರಿಯನ್ನೂ ತೆಗೆದುಕೊಂಡು ಬಾ>> ಎಂದನು. 10ಅವನು ಇವುಗಳನ್ನೆಲ್ಲಾ ತೆಗೆದುಕೊಂಡು ಬಂದು ಮೃಗಗಳನ್ನು ಎರಡಾಗಿ ಸೀಳಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು; ಪಕ್ಷಿಗಳನ್ನು ಮಾತ್ರ ಸೀಳಲಿಲ್ಲ. 11ಆ ಪಶುಗಳ ಮೇಲೆ ಹದ್ದುಗಳು ಎರಗಲು ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.

12ಹೊತ್ತು ಮುಣುಗುತ್ತಿರುವಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು; ಕಾರ್ಗತ್ತಲು ಅವನ ಮೇಲೆ ಕವಿಯಿತು; ಅವನು ಮಹಾಭೀತಿಯಿಂದ ಭಯಭ್ರಾಂತನಾದನು. 13ಆಗ ಯೆಹೋವನು ಅಬ್ರಾಮನಿಗೆ, <<ನೀನು ಚೆನ್ನಾಗಿ ತಿಳಿಯತಕ್ಕದ್ದೇನೆಂದರೆ- ನಿನ್ನ ಸಂತತಿಯವರು ಅನ್ಯದೇಶದಲ್ಲಿ ಪ್ರವಾಸಿಯಾಗಿ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು.

14ಅವರನ್ನು ದಾಸರನ್ನಾಗಿ ಮಾಡಸಿಕೊಂಡ ಜನಾಂಗವನ್ನು ನಾನು ದಂಡಿಸಿದ ನಂತರ ಅವರು ಬಹಳ ಸಂಪತ್ತುಉಳ್ಳವರಾಗಿ ಆ ದೇಶದಿಂದ ಬಿಡುಗಡೆಯಾಗಿ ಹೊರಟು ಬರುವರು. 15ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ, ಬಹಳ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ. 16ನಿನ್ನ ಸಂತತಿಯ ನಾಲ್ಕನೆಯ ತಲೆಮಾರಿನವರು ಇಲ್ಲಿಗೆ ತಿರುಗಿ ಬರುವರು, ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ>> ಎಂದು ಹೇಳಿದನು.

17ಹೊತ್ತು ಮುಳುಗಿ ಕಾರ್ಗತ್ತಲಾದಾಗ, ಇಗೋ, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಕಾಣಿಸಿ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು. 18ಆ ದಿನದಲ್ಲಿ ಯೆಹೋವನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, <<ಐಗುಪ್ತ ದೇಶದ ನದಿಯಿಂದ ಯೂಫ್ರೇಟೀಸ್ ಮಹಾ ನದಿಯವರೆಗೂ ಇರುವ ಈ ದೇಶವನ್ನೆಲ್ಲಾ ನಿನ್ನ ಸಂತತಿಯವರಿಗೆ ಕೊಟ್ಟಿದ್ದೇನೆ. 19ಕೇನಿಯರೂ, ಕೆನಿಜೀಯರೂ, ಕದ್ಮೋನಿಯರೂ, 20ಹಿತ್ತಿಯರೂ, ಪೆರಿಜೀಯರೂ, ರೆಫಾಯಿಮರೂ, ಅಮೋರಿಯರೂ, ಕಾನಾನ್ಯರೂ, ಗಿರ್ಗಾಷಿಯರೂ, ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,>> ಎಂದು ವಾಗ್ದಾನಮಾಡಿದನು.

21

Copyright information for KanULB